ಶ್ರೀ ರಾಮಲಿಂಗೇಶ್ವರ ಕಾಮದೇವರ ಇತಿಹಾಸ

ಶ್ರೀ ರಾಮಲಿಂಗೇಶ್ವರ ದೇವಾಲಯವು ಪ್ರಾಚೀನ ಮತ್ತು ಪೂಜ್ಯನೀಯ ದೇವಸ್ಥಾನವಾಗಿದ್ದು, ಇದಕ್ಕೆ ಆಳವಾದ ಪೌರಾಣಿಕ ಮಹತ್ವವಿದೆ. ಹಿಂದೂ ಪುರಾಣಗಳ ಪ್ರಕಾರ, ಕಾಮಣ್ಣ ಅಥವಾ ಕಾಮದೇವ (ಮನ್ಮಥ) ವಿಷ್ಣುವಿನ ಪುತ್ರನಾಗಿದ್ದನು. ಇಂದ್ರ ಮತ್ತು ಇತರ ದೇವತೆಗಳು, ಶಿವನ ಗಾಢ ಧ್ಯಾನವನ್ನು ಭಂಗಪಡಿಸಲು ಕಾಮಣ್ಣನನ್ನು ಆಯ್ಕೆ ಮಾಡಿದರು. ಇದು ಅತ್ಯಂತ ಅಗತ್ಯವಾಯಿತು, ಏಕೆಂದರೆ ಶಿವನ ಸಂತಾನ ಮಾತ್ರ ಪರಾಕ್ರಮಶಾಲಿ ದೈತ್ಯನಾದ ತಾರಕಾಸುರನನ್ನು ಸೋಲಿಸಬಹುದಾಗಿತ್ತು.

ಶಿವನನ್ನು ಧ್ಯಾನದಿಂದ ಎಬ್ಬಿಸಲು, ಕಾಮಣ್ಣ ತನ್ನ ದಿವ್ಯ ಶಕ್ತಿಗಳನ್ನು ಬಳಸಿಕೊಂಡು ಪ್ರೇಮ ಮತ್ತು ಆಸಕ್ತಿಯ ಭಾವನೆಗಳನ್ನು ಹುಟ್ಟಿಸುವ ಪ್ರಯತ್ನ ಮಾಡಿದನು. ಆದರೆ, ಈ ಅಪ್ರಯುಕ್ತ ಹಸ್ತಕ್ಷೇಪ ಶಿವನನ್ನು ಕೋಪಗೊಳಿಸಿತು. ಶಿವನು ತನ್ನ ತೃತೀಯ ನೇತ್ರವನ್ನು ತೆರೆದು ಕಾಮಣ್ಣನನ್ನು ಕ್ಷಣಾರ್ಧದಲ್ಲೇ ಭಸ್ಮಮಾಡಿದನು. ಈ ದಾರುಣ ಘಟನೆ, ಶಿವ ಮತ್ತು ಪಾರ್ವತಿಗಳ ಸಂಬಂಧದ ಮುನ್ನಡೆಗೆ ಕಾರಣವಾಯಿತು, ಇದರಿಂದ ಶೂರ ದೇವತೆ ಶ್ರೀ ಕಾರ್ತಿಕೇಯನ ಜನನ ಸಂಭವಿಸಿತು, ಆತನೇ ತಾರಕಾಸುರನನ್ನು ಸಂಹಾರ ಮಾಡಿದನು.

ಈ ದೇವಾಲಯವು ನಂಬಿಕೆ, ಸಹನಶೀಲತೆ ಮತ್ತು ದೇವತೆ-ಮನುಷ್ಯರ ಪರಸ್ಪರ ಸಂಬಂಧದ ಸಂಕೇತವಾಗಿದೆ. ವರ್ಷಗಳ ಕಾಲ ಇದು ಪ್ರಮುಖ ಯಾತ್ರಾ ಕೇಂದ್ರವಾಗಿ ಬೆಳೆಯುತ್ತಿದ್ದಂತೆ, ವಿಶೇಷವಾಗಿ ಹೋಳಿಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿ ಸಮೂಹವಾಗಿ ಸೇರಿ ಕಾಮಣ್ಣನ ಪೌರಾಣಿಕ ಕಥೆಯನ್ನು ಸ್ಮರಿಸುತ್ತಾರೆ ಮತ್ತು ಅದ್ದೂರಿಯಾಗಿ ಹಬ್ಬವನ್ನು ಆಚರಿಸುತ್ತಾರೆ.

ನವಲಗುಂದದಲ್ಲಿಯ ವಿಶೇಷ

ನವಲಗುಂದದಲ್ಲಿಯ ಆಚರಣೆ ರಾಜ್ಯದಲ್ಲಿಯೇ ವಿಶಿಷ್ಟ ರೀತಿಯದು. ಜನರು ಶಿವ ಪಾರ್ವತಿಯನ್ನು ಪೂಜಿಸುವುದು ಸಾಮಾನ್ಯ ಆದರೆ ಇಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಕಾಮನ ಉಪಾಸನೆಯನ್ನು ಮಾಡುವುದು ವಿಶಿಷ್ಟ. ಚಾವಡಿ,ಸಿದ್ಧಾಪೂರ ಒಣಿ, ಮಾದರ ಓಣಿ, ತೆಗ್ಗಿನಕೇರಿ, ಹಳ್ಳದ ಒಣಿ, ಗೌಡರ ಓಣಿ,ಮಚ್ಚಿಗರ ಓಣಿ, ಅಕ್ಕಿಯವರ ಓಣಿ, ರಾಮಲಿಂಗ ಓಣಿ ಮುಂತಾದ ಕಡೆಗೆ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿರುತ್ತದೆ.ಇವುಗಳಲ್ಲಿ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪಿಸಿದ, ಶ್ರೀ ರಾಮಲಿಂಗೇಶ್ವರ ಕಾಮದೇವರಿಗೆ (ಕಾಮಣ್ಣ) ಬಹಳ ಮಹತ್ವವಿದೆ.

ಪ್ರತಿಷ್ಠಾಪನೆ

ಶತಮಾನಗಳಷ್ಟು ಪ್ರಾಚೀನ ಇತಿಹಾಸ ಹೊಂದಿರುವ ಕಾಮಣ್ಣನನ್ನು ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸುತ್ತಾರೆ. ಹೋಳಿ ಹುಣ್ಣಿಮೆಯ ಮುನ್ನದ ಏಕಾದಶಿ ರಾತ್ರಿ, ಈ ಮೂರ್ತಿಯನ್ನು ನಿಂತಬಂಗಿಯಲ್ಲಿ ಪ್ರತಿಷ್ಠಾಪಿಸುತ್ತಾರೆ. ದ್ವಾದಶಿಯಂದು ಬೆಳಿಗ್ಗೆಯಿಂದ ಭಕ್ತರಿಗೆ ದರ್ಶನ ಲಭ್ಯವಿರುತ್ತದೆ. ಹುಣ್ಣಿಮೆಯಂದು ಲಕ್ಷಾಂತರ ಭಕ್ತರು ಕಾಮಣ್ಣನ ದರ್ಶನ ಪಡೆದು ಹರಕೆ ಸಲ್ಲಿಸುತ್ತಾರೆ. ಭಕ್ತರು ತೆಂಗಿನಕಾಯಿ ಮತ್ತು ಬಾಸಿಂಗವನ್ನು ಅರ್ಪಿಸಿ ಧನ್ಯರಾಗುತ್ತಾರೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.

ಹುಣ್ಣಿಮೆ ದಿನದ ಬಳಿಕ, ಭಕ್ತರು ಬಣ್ಣದ ಓಕುಳಿ (ಹೋಳಿ) ಆಟದಲ್ಲಿ ನಿರತರಾಗುತ್ತಾರೆ. ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾದ ಕಾಮಣ್ಣನ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಜೆಯ ವೇಳೆ ವಿಜೃಂಭಣೆಯಿಂದ ಸಾಗುತ್ತದೆ. ಎಲ್ಲ ವಯಸ್ಸಿನವರೂ ಹಲಗೆಯನ್ನು ನಾದಮಯವಾಗಿ ಬಾರಿಸುತ್ತಾರೆ. ಮೆರವಣಿಗೆ ಬಳಿಕ, ರಾತ್ರಿ ಕಾಮದಹನದೊಂದಿಗೆ ಹೋಳಿ ಹುಣ್ಣಿಮೆ ಉತ್ಸವ ಮುಕ್ತಾಯಗೊಳ್ಳುತ್ತದೆ.

ಹರಕೆ

ಮದುವೆ ಆಗಲು ಬೆಳ್ಳಿಯ ಬಾಸಿಂಗವನ್ನು,ಮಕ್ಕಳಾಗಲು ಅನೇಕರು ಬೆಳ್ಳಿಯ ತೋಟ್ಟಿಲನ್ನು,ಗಂಡು ಸಂತಾನಕ್ಕಾಗಿ ಬೆಳ್ಳಿಯ ಮೀಸೆ,  ಆರೋಗ್ಯ ಭಾಗ್ಯಕ್ಕಾಗಿ ಬೆಳ್ಳಿಯ ಕುದುರೆ,ಮನೆ ನೆರಳು ಭಾಗ್ಯಕ್ಕಾಗಿ ಬೆಳ್ಳಿಯ ಚತ್ತರಗಿ ಉದ್ಯೋಗ ಭಾಗ್ಯಕ್ಕಾಗಿ ಬೆಳ್ಳಿಯ ಪಾದ, ಕಣ್ಣು ದೃಷ್ಟಿಯ ಭಾಗ್ಯಕ್ಕಾಗಿ ಬೆಳ್ಳಿಯ ಕಣ್ಣು, ವಿದ್ಯಾಭ್ಯಾಸಕ್ಕಾಗಿ ಬೆಳ್ಳಿಯ ಹಸ್ತ ,ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ.
  ಈ ಹಿಂದೆ ನಾರು ಬೇನೆ ವ್ಯಾಪಕವಾಗಿದ್ದಾಗ ಅದರ ನಿವಾರಣೆಗಾಗಿ ಬೆಳ್ಳಿಯ ನಾರನ್ನು ನೀಡಿದ್ದುಂಟು. ಅನೇಕರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಈಗಲೂ ಹರಕೆ ಹೊರುತ್ತಾರೆ. ರಾಶಿಗಟ್ಟಲೇ ಬೆಳ್ಳಿಯ ಬಾಸಿಂಗ ಹಾಗೂ ತೊಟ್ಟಿಲುಗಳು ಇರುವುದನ್ನು ಕಾಣಬಹುದು.

ತಯಾರಿಸಿದ ಬಗೆ

ಕಾಮಣ್ಣನಿಗೆ ಜೀವ ತುಂಬಲು, ಒಬ್ಬ ಶಿಲ್ಪಿ ಪ್ರತಿ ನಕ್ಷತ್ರದ ಪ್ರಭಾವವನ್ನು ಗಮನದಲ್ಲಿ ಇಟ್ಟುಕೊಂಡು, ಪ್ರತಿಯೊಂದು ಭಾಗವನ್ನು ವಿಭಿನ್ನ ಕಟ್ಟಿಗೆಯಿಂದ ತಯಾರಿಸಲು ಪ್ರಾರಂಭಿಸಿದ. ಕೊನೆಗೆ, ಮೂರ್ತಿಯ ತಲೆಯ ಹಿಂಭಾಗದಲ್ಲಿ ಎರಡು ರಂಧ್ರಗಳು ಉಳಿದವು. ಅವುಗಳನ್ನು ವಿಶೇಷ ಕಟ್ಟಿಗೆಯಿಂದ ಮುಚ್ಚುವ ಮೊದಲೇ, ಶಿಲ್ಪಿ ಕಾಲವಾದನು. ಈ ರಂಧ್ರಗಳು ಹಾಗೇ ಉಳಿದವು. ಅವುಗಳನ್ನು ಮುಚ್ಚಲು ಯಾವ ನಕ್ಷತ್ರ ಮತ್ತು ಯಾವ ಕಟ್ಟಿಗೆ ಬೇಕೋ ಎಂಬುದು ನಿಗೂಢವಾಗಿಯೇ ಉಳಿಯಿತು. ಆದರೂ, ಕಾಮಣ್ಣನ ಮುಖಚರ್ಯೆ ಅಪೂರ್ವವಾಗಿ ಆಕರ್ಷಕವಾಗಿದೆ. ಗಂಭೀರ ಮೀಸೆಯುಳ್ಳ ಹಸನ್ಮುಖದ ಕಾಮಣ್ಣ, ಶಕ್ತಿಯುತ ಮತ್ತು ಜೀವಂತ ಭಾವನೆಯನ್ನು ಒಲಗಿಸುತ್ತದೆ. ಚೆಲುವ ಗಂಡು ಮಕ್ಕಳಿಗೆ ರಾಮಲಿಂಗ ಕಾಮಣ್ಣನಂತೆ ಚೆಲುವ ಎಂದು ಹೇಳುವ ವಾಡಿಕೆಯಿದೆ.

ಮರುಹುಟ್ಟು

ಯುಗಾದಿಯ ಪ್ರತಿಪದೆಯಂದು ರಾಮಲಿಂಗ ಕಾಮಣ್ಣ ಮರುಹುಟ್ಟು ಪಡೆಯುತ್ತಾನೆ ಎಂಬ ನಂಬಿಕೆಯಿರುವುದರಿಂದ, ಪ್ರತಿವರ್ಷ ಕಾಮಣ್ಣನನ್ನು ಕುಳಿತ ಭಂಗಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಆಚರಣೆ ಭಕ್ತರಲ್ಲಿ ಆಧ್ಯಾತ್ಮಿಕ ಶ್ರದ್ಧೆ ಮತ್ತು ಪರಂಪರೆಯ ಬಗ್ಗೆ ಪ್ರೀತಿ ಹೆಚ್ಚಿಸುತ್ತದೆ

Leave a Comment